ಕೋರಿಯಾಪ್ಸಿಸ್

ಆಸ್ಟರೇಸೀ (ಕಂಪಾಸಿóಟೀ) ಕುಟುಂಬಕ್ಕೆ ಸೇರಿದ ಒಂದು ಸುಂದರವಾದ ಅಲಂಕಾರ ಸಸ್ಯ. ಇದಕ್ಕೆ ಕ್ಯಾಲಿಯಾಪ್ಸಿಸ್ ಎಂಬ ಹೆಸರೂ ಇದೆ. ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯಜಾತಿಯಾದ ಇದರಲ್ಲಿ ಸು.50ಕ್ಕೂ ಹೆಚ್ಚು ಪ್ರಭೇದಗಳಿವೆ. ಎಲ್ಲವೂ 3'ಗಿಂತ ಹೆಚ್ಚು ಎತ್ತರಕ್ಕೆ ಬೆಳೆಯದ ಮೂಲಿಕೆ ಸಸ್ಯಗಳು. ಹಲವಾರು ಸಣ್ಣ ಹಾಗೂ ಉದ್ದನೆಯ ವಿಭಾಗಗಳಾಗಿ ಕತ್ತರಿಸಿದ ಅಂದವಾದ ಎಲೆಗಳೂ ಒಂಟಿಹೂಗಳಂತೆ ಕಾಣುವ ಚಂಡುಮಂಜರಿ ಮಾದರಿಯ ಹೂ ಗೊಂಚಲುಗಳೂ ಕೋರಿಯಾಪ್ಸಿಸ್ ಗಿಡದ ವಿಶೇಷ ಲಕ್ಷಣಗಳು. ಹೂಗೊಂಚಲಿನ ಅಂಚಿನಲ್ಲಿ ಉದ್ದಕ್ಕೆ ಚಾಚಿರುವ ಹಲವಾರು ರೇ ಹೂಗಳೂ ಮಧ್ಯಭಾಗದಲ್ಲಿ ಸಣ್ಣಗಾತ್ರದ ಅನೇಕ ಡಿಸ್ಕ್ ಹೂಗಳೂ ಇವೆ. ರೇ ಹೂಗಳ ಬಣ್ಣ ಈ ಗಿಡದ ವಿವಿಧ ಪ್ರಭೇದಗಳಲ್ಲಿ ಹಳದಿ, ಕಂಚು, ಕಿತ್ತಳೆ, ಕಡುಗೆಂಪು ಇತ್ಯಾದಿಯಾಗಿ ವೈವಿಧ್ಯಮಯವಾಗಿದ್ದು ಗಿಡಗಳ ಸೌಂದರ್ಯಕ್ಕೆ ಮುಖ್ಯ ಕಾರಣವೆನಿಸಿದೆ.

ಉದ್ಯಾನ ಪ್ರ್ರಾಮುಖ್ಯದ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧವಾಗಿರುವ ಕೋರಿಯಾಪ್ಸಿಸ್ ಪ್ರಭೇದಗಳು ಇವು: 1 ಕೋ.ಡ್ರಮಾಂಡಿಯೈ. 8"-10" ಎತ್ತರಕ್ಕೆ ಬೆಳೆಯುವ ಕುಳ್ಳುಪ್ರಭೇದ; ಪುಷ್ಪಸಮೃದ್ಧಿಗೆ ಹೆಸರಾಗಿದೆ. ಹೂಗಳ ಬಣ್ಣ ಹಳದಿ. 2 ಕೋ.ಗ್ರಾಂಡಿಫ್ಲೋರ. 3 ಎತ್ತರಕ್ಕೆ ಬೆಳೆಯುತ್ತದೆ. ಹೂಗಳ ಬಣ್ಣ ಕಿತ್ತಳೆ ಮಿಶ್ರಿತ ಹಳದಿ. 3 ಕೋ. ಟಿಂಕ್ಟೋರಿಯ. 1'-3' ಎತ್ತರಕ್ಕೆ ಬೆಳೆಯುತ್ತದೆ; ಕಡುಗೆಂಪು ಬಣ್ಣದ ಹೂಗಳಿಂದಾಗಿ ಪ್ರಸಿದ್ಧವಾಗಿದೆ. 4 ಕೋ.ಕರೊನೇರಿಯ. ಉಳಿದೆಲ್ಲ ಬಗೆಗಳಿಗಿಂತ ತಡವಾಗಿ ಹೂ ಬಿಡುತ್ತದೆ.

ಕೋರಿಯಾಪ್ಸಿಸ್ ಗಿಡವನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸಬಹುದು. ಇದರ ಬೇರುಗಳು ಹರಡಲು ಹೆಚ್ಚು ಸ್ಥಳ ಬೇಕಾಗುವುದರಿಂದ ಕುಂಡಗಳಿಗಿಂತ ನೇರವಾಗಿ ನೆಲದಲ್ಲಿ ಬೆಳೆಸುವುದೇ ಉತ್ತಮ. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ. ವರ್ಷದ ಯಾವ ಕಾಲದಲ್ಲಾದರೂ ಇದನ್ನು ಬೆಳೆಸಬಹುದು. ಮೊದಲು ಒಟ್ಲು ಪಾತಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಸಸಿಗಳಲ್ಲಿ 6ನೆಯ ಎಲೆ ಹೊರಟಾಗ ಬೇರೆ ಮಡಿಗಳಿಗೆ ವರ್ಗಾಯಿಸಬೇಕು. ಒಂದು ಸಸಿಯಿಂದ ಇನ್ನೊಂದಕ್ಕೆ 1'-1 ಳಿ ಅಂತರ ಇರಬೇಕು. ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಮತ್ತು ಹಿಂಡಿಗೊಬ್ಬರದ ದ್ರಾವಣ ಹಾಕುತ್ತ ಇದ್ದು ಗಿಡಗಳು 75 ದಿವಸ ವಯಸ್ಸಿನವಾದಾಗ ಅವುಗಳ ತುದಿಯನ್ನು ಚಿವುಟಿಹಾಕಬೇಕು. ಹೀಗೆ ಮಾಡಿದರೆ ಮುಂದೆ 15 ದಿವಸಗಳಲ್ಲಿ ಗಿಡಗಳು ಹೂಬಿಡಲು ಪ್ರಾರಂಭಿಸುತ್ತವೆ.   (ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ